Saturday, June 29, 2013

                  ಒಂದು ಊರು. ಅಲ್ಲೊಬ್ಬ ಪರೋಪಕಾರಿ ಶ್ರೀಮಂತ. ನಾಸ್ತಿಕನೂ ಆಗಿದ್ದರಿಂದ ಊರ ಜನರಿಂದ ಭಾರಿ ಗೌರವ. ಇಂಥ ಹಿನ್ನೆಲೆಯ ಯಜಮಾನರಿಗೆ ಒಬ್ಬ ಮಗನಿದ್ದ. ಮಗನಷ್ಟೇ ಮುಖ್ಯವಾದ ಸೇವಕನಿದ್ದ. ಸೇವಕನನ್ನು ಯಜಮಾನರು, ಈತ ನನ್ನ ಎರಡನೇ ಮಗ ಎಂದೇ ಹೇಳಿಕೊಳ್ಳುತ್ತಿದ್ದರು. ಹೀಗಿರುವಾಗಲೇ ಅದೊಂದು ದಿನ ಸ್ನಾನದ ಮನೆಯಲ್ಲಿ ಯಜಮಾನರು ಜಾರಿ ಬಿದ್ದರು. ಬಿದ್ದ ರಭಸಕ್ಕೆ ಬೆನ್ನುಮೂಳೆ ಮುರಿದು ಹೋಯಿತು. ಮರುದಿನದಿಂದಲೇ ಬಗೆಬಗೆಯ ವೈದ್ಯಕೀಯ ಚಿಕಿತ್ಸೆಗಳಾದವು. ಏನೂ ಪ್ರಯೋಜನವಾಗಲಿಲ್ಲ. ಒಂದು ತಿಂಗಳು ಹಾಸಿಗೆ ಹಿಡಿದಿದ್ದ ಯಜಮಾನರು, ಕಡೆಗೂ ಒಂದು ದಿನ ಇಹಲೋಕ ತ್ಯಜಿಸಿದರು.

                  ಈ ಯಜಮಾನರ ಬಳಿ ಹತ್ತೊಂಬತ್ತು ಕುದುರೆಗಳಿದ್ದವು. ರಾಜ ಮಹಾರಾಜರ ಕಾಲದಲ್ಲಿ ಬಳಕೆಯಾಗುತ್ತಿದ್ದ ಕುದುರೆಗಳ ಜಾತಿಯವೇ ಇವೆಂದೂ, ಈ ಕುದುರೆಗಳಿಗೆ ಮಾರುಕಟ್ಟೆಯಲ್ಲಿ ಲಕ್ಷಲಕ್ಷ ಬೆಲೆ ಕಟ್ಟಲಾಗುವುದೆಂದೂ ಜನ ಮಾತಾಡಿಕೊಳ್ಳುತ್ತಿದ್ದರು. ಇಂಥ ಕುದುರೆಗಳ ಹಂಚಿಕೆಗೆ ಆತ ವಿಲ್ ಬರೆದಿಟ್ಟಿದ್ದ. ಒಂದು ದಿನ ದೇವಾಲಯದ ಮುಂದಿರುವ ಬಯಲಿನಲ್ಲಿ ಊರಿನ ಹಿರಿಯರೆಲ್ಲರ ಸಮ್ಮುಖದಲ್ಲಿ ಯಜಮಾನರು ಬರೆದಿರುವ 'ವಿಲ್‌' ಒಡೆಯಲಾಯಿತು. ವಿಲ್‌ನ ಪತ್ರದಲ್ಲಿ ಯಜಮಾನರು ತುಂಬ ಸ್ಪಷ್ಟವಾಗಿ ಹೀಗೆ ಬರೆದಿದ್ದರು: 'ನನಗಿರುವ ದೊಡ್ಡ ಆಸ್ತಿಯೆಂದರೆ ಹತ್ತೊಂಬತ್ತು ಕುದುರೆಗಳು. ಅವುಗಳನ್ನು ಮೂರು ಭಾಗವಾಗಿ ಹಂಚಬೇಕು. ಮೊದಲು, ಒಟ್ಟು ಕುದುರೆಗಳಲ್ಲಿ ಅರ್ಧದಷ್ಟು ಕುದುರೆಗಳನ್ನು ನನ್ನ ಮಗನಿಗೆ ಕೊಡಬೇಕು. ನಾಲ್ಕನೇ ಒಂದು ಭಾಗದಷ್ಟು ಕುದುರೆಗಳನ್ನು ದೇವಾಲಯಕ್ಕೆ ದಾನ ಮಾಡಬೇಕು. ಐದನೇ ಒಂದು ಭಾಗದಷ್ಟು ಕುದುರೆಗಳನ್ನು ಸೇವಕನಿಗೆ ಕೊಡಬೇಕು...'



                     ವಿಲ್‌ನ ಸಾರಾಂಶ ತಿಳಿದ ಮೇಲೆ ಊರಿನ ಪ್ರತಿಯೊಬ್ಬರೂ ಪರಪರನೆ ತಲೆ ಕೆರೆದುಕೊಂಡು ಯೋಚಿಸಿದರು. ಯಾರಿಗೂ ಸರಿಯುತ್ತರ ಹೊಳೆಯಲಿಲ್ಲ. ಕಾರಣ, ಶ್ರೀಮಂತನ ಬಳಿ ಇದ್ದುದು ಹತ್ತೊಂಬತ್ತು ಕುದುರೆಗಳು. ಅವುಗಳಲ್ಲಿ ಅರ್ಧದಷ್ಟು ಕುದುರೆಗಳನ್ನು ಮಗನಿಗೆ, ನಾಲ್ಕನೇ ಒಂದು ಭಾಗದಷ್ಟು ಕುದುರೆಗಳನ್ನು ದೇವಾಲಯಕ್ಕೆ ಹಾಗೂ ಐದನೇ ಒಂದು ಭಾಗದಷ್ಟು ಕುದುರೆಗಳನ್ನು ಸೇವಕನಿಗೆ ನೀಡಬೇಕೆಂದು ಹೇಳಲಾಗಿತ್ತು. ಇರುವ ಕುದುರೆಗಳ ಒಟ್ಟು ಸಂಖ್ಯೆ ಹತ್ತೊಂಬತ್ತು. ಅದರಲ್ಲಿ ಅರ್ಧ ಮಾಡಿದರೆ ಒಂಭತ್ತೂವರೆ ಎಂದು ಅರ್ಥ ಬರುತ್ತದೆ. ಆದರೆ ಅರ್ಧ ಭಾಗವೆಂದು ಹಂಚುವುದಕ್ಕೆ ಕುದುರೆಯೆಂಬುದು ಹಣವಲ್ಲ, ಸಿಹಿ ತಿಂಡಿಯೂ ಅಲ್ಲ. ಹೀಗಿರುವಾಗ ಆಸ್ತಿಯನ್ನು ಹಂಚುವುದಾದರೂ ಹೇಗೆ ಎಂದು ತಲೆಕೆಡಿಸಿಕೊಂಡಿದ್ದೇ ಬಂತು. ಸಮಸ್ಯೆಗೆ ಪರಿಹಾರ ದೊರೆಯಲಿಲ್ಲ. ಈ ಸಂದರ್ಭದಲ್ಲೇ ಒಂದಿಬ್ಬರು, ಎಲ್ಲ ಕುದುರೆಗಳನ್ನೂ ಮಾರಿ, ಅದರಿಂದ ಬರುವ ಹಣವನ್ನು ವಿಲ್‌ನಲ್ಲಿ ಸೂಚಿಸಿರುವಂತೆ ಹಂಚೋಣ ಎಂದರು. ಆದರೆ ಈ ಮಾತಿಗೆ ಶ್ರೀಮಂತನ ಮಗ ಒಪ್ಪಲಿಲ್ಲ. ಊರಿನ ಎಲ್ಲರಿಗೂ ಏನೋಬುದ್ಧಿ ಮಾತು ಹೇಳುವ ಉದ್ದೇಶದಿಂದಲೇ ನಮ್ಮ ತಂದೆ ಹೀಗೆ ಮಾಡಿರಬಹುದು. ಯಾರಾದರೂ ಬುದ್ಧಿವಂತರನ್ನು ಕರೆಸಿ ಎಂದು ಒತ್ತಾಯಿಸಿದ.

                     ಪರಿಣಾಮವಾಗಿ, ಸುತ್ತಲಿನ ಊರುಗಳಿಗೆಲ್ಲಾ ಸುದ್ದಿ ಹೋಯಿತು. ನಾಲ್ಕು ದಿನಗಳ ನಂತರ ಬುದ್ಧಿವಂತನೊಬ್ಬ ಪಳಪಳ ಹೊಳೆಯುತ್ತಿದ್ದ ಕುದುರೆ ಹತ್ತಿ ಶ್ರೀಮಂತನ ಊರಿಗೆ ಬಂದ. ಅಲ್ಲಿನ ಮುಖಂಡರನ್ನು ಭೇಟಿಯಾಗಿ, ನಿಮ್ಮ ಸಮಸ್ಯೆ ಹೇಳಿ, ಪರಿಹರಿಸೋಣ ಎಂದ. 'ಕಾಲವಾದ ಯಜಮಾನರಿಗೆ ಸೇರಿದ ಹತ್ತೊಂಬತ್ತು ಕುದುರೆಗಳಿವೆ. ಅವುಗಳಲ್ಲಿ ಅರ್ಧದಷ್ಟನ್ನು ಮಗನಿಗೆ, ನಾಲ್ಕನೇ ಒಂದು ಭಾಗದಷ್ಟು ದೇವಾಲಯಕ್ಕೆ ಹಾಗೂ ಐದನೇ ಒಂದು ಭಾಗವನ್ನು ಸೇವಕನಿಗೆ ನೀಡಬೇಕೆಂದು ಅವರು ವಿಲ್ ಬರೆದಿದ್ದಾರೆ. ಆದರೆ ಹತ್ತೊಂಬತ್ತು ಕುದುರೆಗಳನ್ನು ಅರ್ಧ ಭಾಗ ಮಾಡುವುದು ಹೇಗೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ' ಎಂದರು. ಕೂಡಲೇ ಕುದುರೆಗಳನ್ನು ತಂದು ನಿಲ್ಲಿಸಿ ಎಂದ ಬುದ್ಧಿವಂತ, ಊರ ಜನ ತಕ್ಷಣವೇ ಹಾಗೆ ಮಾಡಿದರು. ಅವುಗಳ ಜೊತೆಗೆ ತನ್ನ ಕುದುರೆಯನ್ನುನಿಲ್ಲಿಸಿ ಹೇಳಿದ. ಈಗ ಯಜಮಾನರು ಹೇಳಿರುವಂತೆಯೇ ವಿಂಗಡಿಸೋಣ. ನನ್ನ ಕುದುರೆಯೂ ಸೇರಿದರೆ, ಈಗ ಒಟ್ಟಾಗಿ ಇಪ್ಪತ್ತು ಕುದುರೆಗಳಿವೆ. ಅವುಗಳಲ್ಲಿ ಅರ್ಧದಷ್ಟು ಎಂದರೆ ಹತ್ತು. ಅವು ಯಜಮಾನರ ಮಗನಿಗೆ ಸೇರಲಿ. ಇಪ್ಪತು ಕುದುರೆಗಳಲ್ಲಿ ನಾಲ್ಕನೇ ಒಂದು ಭಾಗ ಅಂದರೆ ಐದು ಕುದುರೆಗಳು ಎಂದಾಗುತ್ತದೆ. ಅವು ದೇವಾಲಯದ ಪಾಲಾಗಲಿ. ಹಾಗೆಯೇ, ಇಪ್ಪತ್ತು ಕುದುರೆಗಳ ಪೈಕಿ ಐದನೇ ಒಂದು ಭಾಗ ಅಂದರೆ ನಾಲ್ಕು ಕುದುರೆಗಳು. ಅವು ಸೇವಕನ ಮನೆಗೆ ಹೋಗಲಿ. ಹೀಗೆ ಹಂಚಿಕೆ ಮಾಡಿದ ನಂತರವೂ ನನ್ನ ಕುದುರೆ ಹಾಗೆಯೇ ಉಳಿದುಕೊಂಡಿದೆ. ನಾನಿನ್ನು ಹೋಗಿ ಬರುತ್ತೇನೆ ಎಂದು ಹೇಳಿದ ಬುದ್ಧಿವಂತ, ತನ್ನ ಕುದುರೆ ಏರಿ ಹೊರಟೇ ಹೋದ.

1 comment:

Categories (ವಿಭಾಗಗಳು)

Subscribe to RSS Feed Follow me on Twitter!