Saturday, June 29, 2013


ಅವನು ಮಾತಿನಮಲ್ಲ ಹಾಗೂ ತುಂಟ . ಆಗಷ್ಟೇ ಡಿಗ್ರಿ ಮುಗಿಸಿರುತ್ತಾನೆ. ರಜೆ ಕಳೆವ ನೆಪದಲ್ಲಿ ಸಿಟಿಗೆ, ಅಲ್ಲಿರುವ ಬಂಧುಗಳ ಮನೆಗೆ ಬಂದಿರುತ್ತಾನೆ. ಇಡೀ ದಿನ ಟೀವಿ ನೋಡುವುದು, ಬೇಸರ ಆಯಿತೆಂದರೆ ನೆರೆಮನೆಯ ಹುಡುಗರೊಂದಿಗೆ ಕೇರಂ ಅಥವಾ ಚೆಸ್ ಆಡುವುದು. ಆಗಲೂ ಬೋರ್ ಅನ್ನಿಸಿದರೆ ಪಿವಿಆರ್‌ಗೆ ಹೋಗಿ ಸಿನಿಮಾ ನೋಡುವುದು, ಮಾಲ್‌ನಲ್ಲಿ ರೌಂಡ್ ಹೊಡೆದು ಬರುವುದು... ಹೀಗಿತ್ತು ಅವನ ದಿನಚರಿ. ದಿನವೂ ಅದೇ ಟೀವಿ, ಅದೇ ಆಟ, ಅದೇ ಮಾಲ್, ಅದೇ ಹಳೆಯ ಸಿನಿಮಾ... ಇದೆಲ್ಲಾ ಬೋರ್ ಅನಿಸಿದ್ದಾಗಲೇ ಈ ತರಲೆ, ಅದೊಂದು ಬೆಳಗ್ಗೆ ಟ್ರಿಮ್ಮಾಗಿ ಡ್ರೆಸ್ ಮಾಡಿಕೊಂಡು ಮನೆಯಿಂದ ಒಂದು ಕಿಲೋಮೀಟರ್ ದೂರವಿರುವ ಪಾರ್ಕ್‌ಗೆ ಬರುತ್ತಾನೆ.


ಪಾರ್ಕ್‌ನಲ್ಲಿ, ಐದಾರು ಕಲ್ಲು ಬೆಂಚುಗಳಿರುತ್ತವೆ. ಗೆಳೆಯರು, ದಂಪತಿಗಳು, ವೃದ್ಧರು ಅವುಗಳಲ್ಲಿ ಆಸೀನರಾಗಿರುತ್ತಾರೆ. ಮತ್ತಷ್ಟು ಜನ ವ್ಯಾಯಾಮದ ನೆಪದಲ್ಲಿ ಬಗೆಬಗೆಯ ಕಸರತ್ತು ಮಾಡುತ್ತಿರುತ್ತಾರೆ. ಇಂಥವರೆಲ್ಲರ ಮಧ್ಯೆಯೇ ಒಂದು ಕಲ್ಲು ಬೆಂಚಿನ ಮೇಲೆ ಅವಳು ಓದುತ್ತಾ ಕೂತಿರುತ್ತಾಳೆ. ವಯೋಸಹಜ ಕುತೂಹಲದಿಂದ ಅವಳನ್ನು ತುಂಬ ಹತ್ತಿರದಿಂದ ಗಮನಿಸಿದ ಹುಡುಗ ತಬ್ಬಿಬ್ಬಾಗುತ್ತಾನೆ. ಕಾರಣ, ಆಕೆ ಅಪ್ರತಿಮ ಸುಂದರಿಯಾಗಿರುತ್ತಾಳೆ. ಮರುಕ್ಷಣದಿಂದಲೇ ಅವಳನ್ನು ಮಾತಾಡಿಸುವ, ಅವಳೊಂದಿಗೆ ಫ್ರೆಂಡ್‌ಶಿಪ್ ಬೆಳೆಸುವ ತಹತಹ ಶುರುವಾಗುತ್ತದೆ. ಗೆಳೆತನ ಸಾಧ್ಯವಾಗಬೇಕೆಂದರೆ ಮೊದಲು ಪರಿಚಯವಾಗಬೇಕು. ಪರಿಚಯ ಆಗಬೇಕೆಂದರೆ ಯಾವುದೋ ನೆಪದಿಂದ ಒಮ್ಮೆ 'ಹಾಯ್‌' ಎನ್ನಬೇಕು. ಅಂಥದೊಂದು ಸಂದರ್ಭ ಸೃಷ್ಟಿಸಿಕೊಳ್ಳುವ ಉದ್ದೇಶದಿಂದಲೇ ಇವನು ಅವಳ ಪಕ್ಕ ಕೂರುತ್ತಾನೆ. ಎರಡು ನಿಮಿಷದ ನಂತರ ಮೆಲ್ಲಗೆ ಕೆಮ್ಮುತ್ತಾನೆ. ಅವಳು ಪ್ರತಿಕ್ರಿಯಿಸುವುದಿಲ್ಲ. ನಂತರ ಮೆಲ್ಲಗೆ ಅವಳ ಪುಸ್ತಕದ ಮಧ್ಯೆ ಇದ್ದ ನ್ಯೂಸ್ ಪೇಪರ್ ಎತ್ತಿಕೊಳ್ಳುತ್ತಾನೆ. ಅದರಲ್ಲಿದ್ದ ಪದಬಂಧವನ್ನು ತುಂಬಿಸುವ ನೆಪದಲ್ಲಿ, ಮೆಲ್ಲಗೆ ಅವಳಿಗೆ ಕೈ ತಾಗಿಸಿ ತೊದಲುತ್ತಾನೆ: ಪೆ...ಪೆ... ಪೆನ್ ಬೇಕಿತ್ತು, ಪೆನ್ನು...

ಹುಡುಗಿ ತಕ್ಷಣವೇ ಪೆನ್ ಕೊಟ್ಟು, ಓದು ಮುಂದುವರಿಸುತ್ತಾಳೆ. ಹತ್ತು ನಿಮಿಷದ ನಂತರ ಇವನು ಪೆನ್ ಹಿಂತಿರುಗಿಸುವ ನೆಪದಲ್ಲಿ ಅವಳತ್ತ ನೋಡುತ್ತಾನೆ. ಆಕೆ, ಬೇರೊಂದು ಪೆನ್‌ನಲ್ಲಿ ಶ್ರದ್ಧೆಯಿಂದ ನೋಟ್ಸ್ ಮಾಡುತ್ತಿರುತ್ತಾಳೆ. ಅವಳನ್ನು ಮಾತಾಡಿಸಲು ಇವನಿಗೆ ಧೈರ್ಯವಾಗುವುದಿಲ್ಲ. ಅದೇ ಪೇಪರಿನ ಮೇಲೆ ಥ್ಯಾಂಕ್ಸ್ ಎಂದು ಬರೆದು, ಪೆನ್ ಇಟ್ಟು ಎದ್ದು ಹೋಗುತ್ತಾನೆ.

ಮರುದಿನ, ಅವನು ಪಕ್ಕ ಕುಳಿತ ತಕ್ಷಣವೇ, ತಾನೇ ಮುಂದಾಗಿ ಪೆನ್ ಹಾಗೂ ಪೇಪರ್ ಕೊಡುತ್ತಾಳೆ ಹುಡುಗಿ. ಜೊತೆಗೆ, ಥ್ಯಾಂಕ್ಸ್ ಇನ್ ಅಡ್ವಾನ್ಸ್ ಎಂದೂ ಬರೆದಿರುತ್ತಾಳೆ. ಇವನು ಪ್ಯಾದೆಯಂತೆ ನಗುತ್ತಾನೆ. ಆನಂತರದಲ್ಲಿ ಅವಳ ಗಮನ ಸೆಳೆಯಲೆಂದು ನಾನಾ ಥರದ ಚೇಷ್ಟೆ ಮಾಡುತ್ತಾನೆ. ಅವಳು ಗಮನಿಸುವುದಿಲ್ಲ. ಇವನಿಗೆ ಬೇಜಾರಾಗುತ್ತದೆ. ಅವಳನ್ನು ಮಾತಾಡಿಸಲೇಬೇಕು ಎಂಬ ಉದ್ದೇಶದಿಂದ ಮೆಲ್ಲಗೆ ಹುಶ್, ಹುಶ್ ಎಂದು ಸದ್ದು ಮಾಡುತ್ತಾನೆ. ಹುಡುಗಿ ಆಗಲೂ ತಿರುಗಿ ನೋಡುವುದಿಲ್ಲ. ಇವನು ನಿರಾಸೆಯಿಂದ ಎದ್ದು ಹೋಗುತ್ತಾನೆ. 



ಮೂರನೇ ದಿನ, ಅವಳಿಗಿಂತ ಮೊದಲೇ ಪಾರ್ಕ್‌ಗೆ ಬರುತ್ತಾನೆ. ಅವಳು ಕೂರುವ ಜಾಗದಲ್ಲಿ ಮೆತ್ತನೆಯ ದಿಂಬುಗಳನ್ನು ಇಡುತ್ತಾನೆ. ಒಂದಿಷ್ಟು ಕುರುಕಲು ತಿಂಡಿಯನ್ನಿಟ್ಟು, ಅದಕ್ಕೆ ಗುಡ್ ಮಾರ್ನಿಂಗ್ ಎಂಬ ಚೀಟಿ ಅಂಟಿಸಿ, ಬೇರೊಂದು ಕಡೆಗೆ ಮುಖ ಮಾಡಿಕೊಂಡು ನಿಂತಿರುತ್ತಾನೆ. ಎಂದಿನಂತೆ, ಅಲ್ಲಿಗೆ ಓದಲು ಬಂದ ಅವಳಿಗೆ ಮೊದಲು ಬೆರಗಾಗುತ್ತದೆ. ನಂತರ ಖುಷಿಯಾಗುತ್ತದೆ. ಆ ಇದೆಲ್ಲವೂ ಅವನದೇ 'ತಂತ್ರ' ಎಂದು ಅರ್ಥವಾಗುತ್ತದೆ. ಅವನತ್ತ ನೋಡಿ ಹೂವಂತೆ ನಗುತ್ತಾಳೆ. ಕಣ್ಣಲ್ಲಿಯೇ ಥ್ಯಾಂಕ್ಸ್ ಹೇಳಿ ಓದಲು ಕೂತು ಬಿಡುತ್ತಾಳೆ. ಅರ್ಧ ಗಂಟೆಯ ನಂತರ ಆಕೆ ಸುಮ್ಮನೆ ತಲೆ ಎತ್ತಿದರೆ-ಕುರುಕುಲು ತಿಂಡಿ ಹಿಡಿದು ಇವನು ನಿಂತಿರುತ್ತಾನೆ. ಈ ಹುಡುಗನ ಕೇರಿಂಗ್ ನೇಚರ್ ಅವಳಿಗೆ ಇಷ್ಟವಾಗುತ್ತದೆ. ಅವನಿಂದ ತಿಂಡಿ ಪಡೆದು, ಒಂದು ದಿವ್ಯವಾದ ನಗೆ ಬೀರುತ್ತಾಳೆ. ಆದರೆ, ಮಾತಾಡುವುದಿಲ್ಲ. ಬದಲಿಗೆ, ನಿಮ್ಮ ಕಾಳಜಿಗೆ ಧನ್ಯವಾದ ಎಂದು ಒಂದು ಚೀಟಿ ಬರೆದು ಕೊಡುತ್ತಾಳೆ.

ಅಕ್ಕಪಕ್ಕ ಕೂತು ಸುಮ್ಮನೆ ನಗುವ, ತುಟಿ ಪಿಟಕ್ ಎನ್ನದೆ ಅಕ್ಷರಗಳ ಮೂಲಕವೇ ಮಾತಾಡುವ ಆಟ ಅಂದಿನಿಂದಲೇ ಶುರುವಾಗುತ್ತದೆ. ಅವಳ ಹೆಸರು, ಊರಿನ ವಿವರಣೆ ಕೂಡ ಚೀಟಿಯಲ್ಲಿ ಅರಳಿದ ಅಕ್ಷರದ ಮೂಲಕವೇ ತಿಳಿಯುತ್ತದೆ. ದಿನಗಳು ಕಳೆದಂತೆಲ್ಲಾ ಅವನಿಗೆ ಸಲುಗೆ ಬೆಳೆಯುತ್ತದೆ. ಇವನ ಸಲ್ಲಾಪದ ತೀವ್ರತೆಯೂ ಹೆಚ್ಚುತ್ತದೆ. ಉಹುಂ, ಆಗ ಕೂಡ ಹುಡುಗಿ ಮಾತಾಡುವುದಿಲ್ಲ. ಇಷ್ಟರಲ್ಲಿ ತಿಂಗಳು ಕಳೆದಿರುತ್ತದೆ. ಈ ಅವಧಿಯಲ್ಲಿ ಹುಡುಗಿಯ ತಾಳ್ಮೆ ಮತ್ತು ಸೌಂದರ್ಯ ಇವನಿಗೆ ಹುಚ್ಚು ಹಿಡಿಸಿರುತ್ತದೆ. ಅವಳನ್ನೇ ಮದುವೆಯಾದರೆ ಹೇಗೆ ಎಂದು ಯೋಚಿಸುತ್ತಾನೆ. ಅಷ್ಟೇ ಅಲ್ಲ; ಮರುದಿನ-'ಐ ಲವ್ ಯೂ. ನನ್ನನ್ನು ಮದುವೆ ಆಗ್ತೀಯಾ?' ಎಂಬ ಸಾಲುಗಳಿರುವ ಚೀಟಿಯನ್ನು ಅವಳ ಮುಂದಿಡುತ್ತಾನೆ. ಅವಳು ಅದನ್ನು ಪೂರ್ತಿ ಓದಿ, ನಗಲಾರದೆ ನಕ್ಕು 'ಉಹುಂ ಆಗಲಾರೆ' ಎಂದು ಉತ್ತರ ಬರೆಯುತ್ತಾಳೆ. ಅವಳ ಉತ್ತರ ಕಂಡು ಇವನಿಗೆ ನಾಚಿಕೆ, ಅವಮಾನ, ಸಿಟ್ಟು. ಈತ ಏನೋ ಹೇಳುವ ಮೊದಲೇ ಅವಳು ಇವನಿಗೊಂದು ಚೀಟಿ ಕೊಡುತ್ತಾಳೆ. ಅದರಲ್ಲಿ-'ನಾನು ಹುಟ್ಟಾ ಮೂಗಿ ಮತ್ತು ಕಿವುಡಿ. ಈಗ ಹೇಳು. ನನ್ನನ್ನೂ ಮದುವೆ ಆಗ್ತೀಯಾ?' ಎಂಬ ಸಾಲಿರುತ್ತದೆ.

ಹುಡುಗ ದಿಗ್ಭ್ರಮೆಯಿಂದ ತತ್ತರಿಸುತ್ತಾನೆ. ಅದುವರೆಗಿನ ಅವಳ ಮೌನಕ್ಕೆ ಈಗ ಉತ್ತರ ಸಿಕ್ಕಿರುತ್ತದೆ. ಅವಳೇನಾದರೂ ಹುಡುಗಾಟ ಆಡುತ್ತಿರಬಹುದಾ ಎಂದು ಹುಡುಕುತ್ತಾನೆ. ಅವಳ ಕಂಗಳಲ್ಲಿ ನೋವಿನ ಸೆಳಕು ಮಾತ್ರ ಕಾಣುತ್ತದೆ. ಇವನು, ಎರಡನೇ ಮಾತಾಡದೆ, ತಲೆ ತಗ್ಗಿಸಿಕೊಂಡು ಭಾರವಾದ ಹೆಜ್ಜೆ ಇಡುತ್ತಾ ಹೋಗಿಬಿಡುತ್ತಾನೆ!

----ಸಿನಿಮಾದಲ್ಲಾಗಿದ್ದರೆ, ಹೀರೋ ಹಿಂದೆ ಮುಂದೆ ನೋಡದೆ, ಮೂಗಿ-ಕಿವುಡಿಯನ್ನು ಮದುವೆಯಾಗಿ ತ್ಯಾಗಮಯಿ ಆಗುತ್ತಿದ್ದನೇನೋ. ಆದರೆ ಈ ಕಥೆ ನಡೆದದ್ದು ಗೆಳತಿಯ ಊರಲ್ಲಿ. ಬದುಕು ಸಿನಿಮಾ ಅಲ್ಲವಲ್ಲ: ಹಾಗಾಗಿ ಇಲ್ಲಿ ಕಥೆಗೆ 'ಶುಭಂ' ಎಂಬ ಪರದೆ ಬೀಳಲಿಲ್ಲ...


0 comments:

Post a Comment

Categories (ವಿಭಾಗಗಳು)

Subscribe to RSS Feed Follow me on Twitter!