(೧-೧೦ಗಾಗಿ ಮಂಕುತಿಮ್ಮನ ಕಗ್ಗಗಳು - 1 ನೋಡಿ)
11. ಬಿಂದು ವಿಸರಗಳನುವು, ವಂಕು ಸರಲಗಳನುವು ।
ಚೆಂದ ಕಣ್ಣಿಗೆ ವರ್ಣವಿವಿಧಂಗಳನುವು ॥
ಚೆಂದ ವೇಗ ಸ್ತಿಮಿತದನುವು ಹುಳಿಯುಪ್ಪನುವು।
ದ್ವಂದದನುವುಗಳಂದ - ಮಂಕುತಿಮ್ಮ ॥
12. ಪಿಡಿ ಗಳಿಸು ಭುಜಿಸೊಡೆಯನಾಗೆನ್ನುವುದು ಮೋಹ ।
ಕೊಡು ಸಲಿಸು ಸೇವೆಗೈಯನ್ನುವುದು ಕರುಣೆ ।।
ಬಿಡು ನೀನು ನಾನುಗಳ, ವಿಶ್ವಾತ್ಮಪದವನೀ-
ನಡರೆನ್ನುವುದು ಶಾಂತಿ - ಮಂಕುತಿಮ್ಮ||
13. ಹಿಂದಣದುಳಿವಿರದು, ಮುಂದಣದರುಸಿರಿರದು ।
ಒಂದರೆಕ್ಷಣ ತುಂಬಿ ತೋರುವುದನಂತ ।।
ಒಂದೆ ಕಣ್ಣೊಂದೆ ಗುರಿಯೊಂದೆ ಮೈಮನಮರೆತ ।
ಸುಂದರದ ಲೋಕವದು - ಮಂಕುತಿಮ್ಮ ||
14. ಸುಂದರದ ರಸ ನೂರು; ಸಾರವದರೊಳು ಮೂರು ।
ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳ ।।
ಒಂದರಿಂದೊಂದು ಬೆಳೆಯಾದಂದು ಜೀವನವು ।
ಚೆಂದಗೊಂಡುಜ್ಜುಗವೋ -ಮಂಕುತಿಮ್ಮ ।।
15. ಪರಿಪರಿಯ ವಿಶ್ವಪ್ರಕೃತಿಶಕ್ತಿತೇಜಗಳು ।
ಕೆರಳಿಸಲು ನರಹೃದಯರಭಸಗಳನದರಿಂ ।।
ಪೊರಮಡುವ ಸಂಮೋಹಧೀರಗಂಭೀರಗಳ ।
ಸರಸತೆಯ ಸುಂದರವೊ -ಮಂಕುತಿಮ್ಮ ।।
16. ತಾಯೊ ತಂಗಿಯೊ ಎನಿಪ ಶುಚಿಯ ಸೌಮ್ಯದ ಸೊಬಗು ।
ಪ್ರೇಯಸಿಯ ಕರೆವೊಲಾತುರವಡಿಪ ಬೆಡಗು ।।
ಈಯೆರಡು ಸಮದ ರುಚಿ ನಿನ್ನನಿಬ್ಬಗೆಗೊಳಿಸೆ ।
ಧ್ಯೇಯ ನಿನಗಾವುದೆಲೊ - ಮಂಕುತಿಮ್ಮ ।।
17. ನೀಳುಗೆರೆ ಬಳುಬಳುಕೆ ಕಡಳತೆರೆಯೊಯ್ಯಾರ ।
ತಾಳಲಯ ಸೇರೆ ರಾಗದ ನಾಟ್ಯ ಧಾಟಿ ।।
ಗೋಳದ ಜ್ವಾಲೆಯಿಂ ಗಗನಪಟ ಸಿಂಗಾರ ।
ವೈಲಕ್ಷಣದೊಳಿಂಬು - ಮಂಕುತಿಮ್ಮ ।।
18. ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ ।
ಶೈಲದಚಲತೆಯಿರಲು ಝರಿಯ ವೇಗ ಸೊಗ ।।
ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು ।
ವೈಲಕ್ಷಣದೇ ಚೆಂದ - ಮಂಕುತಿಮ್ಮ ।।
19. ಸೌಂದರ್ಯದೊಳ್ ದ್ವಂದ್ವ, ಬಾಂಧವ್ಯದೊಳ್ ದ್ವಂದ್ವ ।
ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ ।।
ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ ।
ಬಂದವಿಮೋಚನ ನಿನಗೆ - ಮಂಕುತಿಮ್ಮ ।।
20. ಸೌಂದರ್ಯಾಲಯ ಬರಿ ದ್ವಂದ್ವವೇನಲ್ಲ ।
ದ್ವಂದ್ವದೊಳಗನುವು; ಅದು ಪರಿಮಾಣದುಚಿತ ॥
ಸಂಧಾನ ರೀತಿಯದು, ಸಹಕಾರ ನೀತಿಯದು ।
ಸಂದರ್ಭ ಸಹಜತೆಯೊ - ಮಂಕುತಿಮ್ಮ ॥
1. ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||
ಒಂದೇ ಗಾಳಿಯುನುಸಿರ್ವ ನರಜಾತಿಯೊಳಗಿಂತು |
ಬಂದದೀ ವೈಷಮ್ಯ ಮಂಕುತಿಮ್ಮ ||
2. ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿಂತ ಹೆಣ್ಣುಗಂಡೊಲವು ||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ |
ತಿನ್ನುವುದಾತ್ಮವನೆ ಮಂಕುತಿಮ್ಮ ||
3. ಬೆದಕಾಟ ಬದುಕೆಲ್ಲ; ಕ್ಷಣಕ್ಷಣವು ಹೊಸಹಸಿವು |
ಅದಕಾಗಿ ಇದಕಾಗಿ ಮತ್ತೊಂದಕ್ಕಾಗಿ ||
ಅಧಿಕಾರ ಸಿರಿಸೊಗಸು ಕೀರ್ತಿಗಳ ನೆನೆದು ಮನ |
ಕುದಿಯುತಿಹುದಾವಗಂ ಮಂಕುತಿಮ್ಮ ||
4. ಮನೆಯೆ ಮಠವೆಂದು ತಿಳಿ, ಬಂಧುಬಳಗವೆ ಗುರುವು |
ಅನವತಪರಿಚರ್ಯೆಯವರೊರೆವ ಪಾಠ |
ನಿನಗುಳಿವ ಜಗವ ಮುಟ್ಟಿಪ ಸೇತು ಸಂಸಾರ |
ಮನಕೆ ಪುಟಸಂಸ್ಕಾರ ಮಂಕುತಿಮ್ಮ ||
5. ಏನು ಪ್ರಪಂಚವಿದು! ಏನು ಧಾಳಾಧಾಳಿ |
ಏನದ್ಭುತಾಪಾರ ಶಕ್ತಿ ನಿರ್ಘಾತ ||
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |
ಏನರ್ಥವಿದಕೆಲ್ಲ ಮಂಕುತಿಮ್ಮ ||
6. ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ
ಅವನರವಿಗೆಟುಕುವವೊಲೊಂದಾತ್ಮ ನಯವ
ಹವಣಿಸಿದನಿದನು ಪಾಮರಜನದ ಮಾತಿನಲಿ
ಕವನ ನೆನಪಿಗೆ ಸುಲಭ ಮಂಕುತಿಮ್ಮ||
7. ವಿಶದಮಾದೊಂದು ಜೀವನಧರ್ಮದರ್ಶನವ
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು
ನಿಸದವಂ ಗ್ರಂಥಾನುಭವಗಳಿಂದಾರಿಸುತ
ಹೊಸೆದನೀ ಕಗ್ಗವನು ಮಂಕುತಿಮ್ಮ ||
8. ತಾಳಿ ಮೆಲುಮೆಲನೊಮ್ಮೆ ಧಾಳಿ ರಭಸದಿನೊಮ್ಮೆ |
ಹೇಳದೆಯೆ ಕೇಳದೆಯೆ ಬಹನು ವಿಧಿರಾಯ ||
ಕೀಳ ಮೇಲಾಗಿಪನು ಮೇಲ ಕೀಳಾಗಿಪನು |
ತಾಳುಮೆಯಿನಿರು ನೀನು ಮಂಕುತಿಮ್ಮ ||
9. ದ್ರಾಕ್ಷಿ ರಸವೇನಲ್ಲ ಜೀವನದ ತಿರುಳರ್ಗಮ್ |
ಇಕ್ಷು ದಂಡದವೊಲದು ಕಷ್ಟ ಭೋಜನವೆ ||
ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ |
ಮಾಕ್ಷಿಕರು ಮಿಕ್ಕೆಲ್ಲ ಮಂಕುತಿಮ್ಮ ||
10. ತತ್ವ ಸಾಕ್ಷಾತ್ಕಾರ ಚಿತ್ತಶುದ್ದಿಯಿನಹುದು |
ಚಿತ್ತಶೋಧನೆ ಮತಿಚಮತ್ಕಾರವಲ್ಲ ||
ಬಿತ್ತರದ ಲೋಕಪರಿಪಾಕದಿಂ ಸತ್ಕರ್ಮ |
ಸಕ್ತಿಯಿಂ ಶುದ್ಧತೆಯೊ ಮಂಕುತಿಮ್ಮ ||
Next : ಮಂಕುತಿಮ್ಮನ ಕಗ್ಗಗಳು - 2
1. ಹೇಳಲರಿಯನು ನಾನು ಹೇಳೆನಲು ಹೇಳಿದೆನು|
ಬಾಳಲೋಚನನ ಶರಣರಾಳಾಗಿ|
ಹೇಳಿದೆನು ನೋಡು ಸರ್ವಜ್ಞ||
2. ಸರ್ವಜ್ಞನೆಂಬುವನು ಗರ್ವದಿಂದಾದವನೆ?|
ಸರ್ವರೊಳಗೊಂದು ನುಡುಗಲಿತು ವಿದ್ಯೆಯ|
ಪರ್ವತವೇ ಆದ ಸರ್ವಜ್ಞ||
3. ಉಪ್ಪು ಸಪ್ಪನೆಯಕ್ಕು | ಕಪ್ಪುರವು ಕರಿದಿಕ್ಕು|
ಸರ್ಪನಿಗೆ ಬಾಲವೆರಡಕ್ಕು ಸವಣ ತಾ|
ತಪ್ಪಾಡಿದಂದು ಸರ್ವಜ್ಞ||
4. ಮೊಸರು ಇಲ್ಲದ ಊಟ| ಪಸರವಿಲ್ಲದ ಕಟಕ|
ಹಸನವಿಲ್ಲದಳ ರತಿಕೂಟ ಜಿನನ ಬಾಯ್|
ಕಿಸುಕುಳದಂತೆ ಸರ್ವಜ್ಞ||
5. ನಾಟ ರಾಗವು ಲೇಸು| ತೋಟ ಮಲ್ಲಿಗೆ ಲೇಸು|
ಕೂಟವದು ಲೇಸು ಹಿರಿಯರೊಳು ಶಿವನ ಅರಿ|
ದಾಟವೇ ಲೇಸು ಸರ್ವಜ್ಞ||
6. ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವುದು|
ಬೆಸಿ ಲಿಂಗ ಹಸುರೆಳಸದಿರ್ಪ ಹನಿಯಾರಿ
ಹಸಿದು ಹೋದಂತೆ ಸರ್ವಜ್ಞ||
7. ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು|
ಹಾನಿ ಕಾಣಯ್ಯ ಸರ್ವಜ್ಞ||
8. ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|
ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|
ಜ್ಞಾನವೇ ಮೇಲು ಸರ್ವಜ್ಞ||
9. ಎತ್ತ ಹೋದರೂ ಮನವ| ಹತ್ತಿಕೊಂಡೇ ಬಹುದು|
ಮತ್ತೊಬ್ಬ ಸೆಳೆದುಕೊಳಲರಿಯದಾ| ಜ್ಞಾನದಾ
ಬಿತ್ತು ಲೇಸೆಂದ ಸರ್ವಜ್ಞ||
10. ಮನದಲ್ಲಿ ನೆನೆವಿರಲು| ತನುವೊಂದು ಮಠವಕ್ಕು|
ಮನಹೋಗಿ ಹಲವ ನೆನೆದಿಹರೆ ಅದು ಹಾಳು|
ಮನೆಯೆಂದು ತಿಳಿಯೋ ಸರ್ವಜ್ಞ||
11. ದೇಹ ದೇವಾಲಯವು| ಜೀವವೇ ಶಿವಲಿಂಗ|
ಬಾಹ್ಯಾಂಗಳಳಿದು ಭಜಿಪಂಗೆ ಮುಕ್ತಿ ಸಂ|
ದೇಹವಿಲ್ಲೆಂದ ಸರ್ವಜ್ಞ||