1. ಹೇಳಲರಿಯನು ನಾನು ಹೇಳೆನಲು ಹೇಳಿದೆನು|
ಬಾಳಲೋಚನನ ಶರಣರಾಳಾಗಿ|
ಹೇಳಿದೆನು ನೋಡು ಸರ್ವಜ್ಞ||
2. ಸರ್ವಜ್ಞನೆಂಬುವನು ಗರ್ವದಿಂದಾದವನೆ?|
ಸರ್ವರೊಳಗೊಂದು ನುಡುಗಲಿತು ವಿದ್ಯೆಯ|
ಪರ್ವತವೇ ಆದ ಸರ್ವಜ್ಞ||
3. ಉಪ್ಪು ಸಪ್ಪನೆಯಕ್ಕು | ಕಪ್ಪುರವು ಕರಿದಿಕ್ಕು|
ಸರ್ಪನಿಗೆ ಬಾಲವೆರಡಕ್ಕು ಸವಣ ತಾ|
ತಪ್ಪಾಡಿದಂದು ಸರ್ವಜ್ಞ||
4. ಮೊಸರು ಇಲ್ಲದ ಊಟ| ಪಸರವಿಲ್ಲದ ಕಟಕ|
ಹಸನವಿಲ್ಲದಳ ರತಿಕೂಟ ಜಿನನ ಬಾಯ್|
ಕಿಸುಕುಳದಂತೆ ಸರ್ವಜ್ಞ||
5. ನಾಟ ರಾಗವು ಲೇಸು| ತೋಟ ಮಲ್ಲಿಗೆ ಲೇಸು|
ಕೂಟವದು ಲೇಸು ಹಿರಿಯರೊಳು ಶಿವನ ಅರಿ|
ದಾಟವೇ ಲೇಸು ಸರ್ವಜ್ಞ||
6. ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವುದು|
ಬೆಸಿ ಲಿಂಗ ಹಸುರೆಳಸದಿರ್ಪ ಹನಿಯಾರಿ
ಹಸಿದು ಹೋದಂತೆ ಸರ್ವಜ್ಞ||
7. ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು|
ಹಾನಿ ಕಾಣಯ್ಯ ಸರ್ವಜ್ಞ||
8. ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|
ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|
ಜ್ಞಾನವೇ ಮೇಲು ಸರ್ವಜ್ಞ||
9. ಎತ್ತ ಹೋದರೂ ಮನವ| ಹತ್ತಿಕೊಂಡೇ ಬಹುದು|
ಮತ್ತೊಬ್ಬ ಸೆಳೆದುಕೊಳಲರಿಯದಾ| ಜ್ಞಾನದಾ
ಬಿತ್ತು ಲೇಸೆಂದ ಸರ್ವಜ್ಞ||
10. ಮನದಲ್ಲಿ ನೆನೆವಿರಲು| ತನುವೊಂದು ಮಠವಕ್ಕು|
ಮನಹೋಗಿ ಹಲವ ನೆನೆದಿಹರೆ ಅದು ಹಾಳು|
ಮನೆಯೆಂದು ತಿಳಿಯೋ ಸರ್ವಜ್ಞ||
11. ದೇಹ ದೇವಾಲಯವು| ಜೀವವೇ ಶಿವಲಿಂಗ|
ಬಾಹ್ಯಾಂಗಳಳಿದು ಭಜಿಪಂಗೆ ಮುಕ್ತಿ ಸಂ|
ದೇಹವಿಲ್ಲೆಂದ ಸರ್ವಜ್ಞ||
0 comments:
Post a Comment