1. ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||
ಒಂದೇ ಗಾಳಿಯುನುಸಿರ್ವ ನರಜಾತಿಯೊಳಗಿಂತು |
ಬಂದದೀ ವೈಷಮ್ಯ ಮಂಕುತಿಮ್ಮ ||
2. ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿಂತ ಹೆಣ್ಣುಗಂಡೊಲವು ||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ |
ತಿನ್ನುವುದಾತ್ಮವನೆ ಮಂಕುತಿಮ್ಮ ||
3. ಬೆದಕಾಟ ಬದುಕೆಲ್ಲ; ಕ್ಷಣಕ್ಷಣವು ಹೊಸಹಸಿವು |
ಅದಕಾಗಿ ಇದಕಾಗಿ ಮತ್ತೊಂದಕ್ಕಾಗಿ ||
ಅಧಿಕಾರ ಸಿರಿಸೊಗಸು ಕೀರ್ತಿಗಳ ನೆನೆದು ಮನ |
ಕುದಿಯುತಿಹುದಾವಗಂ ಮಂಕುತಿಮ್ಮ ||
4. ಮನೆಯೆ ಮಠವೆಂದು ತಿಳಿ, ಬಂಧುಬಳಗವೆ ಗುರುವು |
ಅನವತಪರಿಚರ್ಯೆಯವರೊರೆವ ಪಾಠ |
ನಿನಗುಳಿವ ಜಗವ ಮುಟ್ಟಿಪ ಸೇತು ಸಂಸಾರ |
ಮನಕೆ ಪುಟಸಂಸ್ಕಾರ ಮಂಕುತಿಮ್ಮ ||
5. ಏನು ಪ್ರಪಂಚವಿದು! ಏನು ಧಾಳಾಧಾಳಿ |
ಏನದ್ಭುತಾಪಾರ ಶಕ್ತಿ ನಿರ್ಘಾತ ||
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |
ಏನರ್ಥವಿದಕೆಲ್ಲ ಮಂಕುತಿಮ್ಮ ||
6. ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ
ಅವನರವಿಗೆಟುಕುವವೊಲೊಂದಾತ್ಮ ನಯವ
ಹವಣಿಸಿದನಿದನು ಪಾಮರಜನದ ಮಾತಿನಲಿ
ಕವನ ನೆನಪಿಗೆ ಸುಲಭ ಮಂಕುತಿಮ್ಮ||
7. ವಿಶದಮಾದೊಂದು ಜೀವನಧರ್ಮದರ್ಶನವ
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು
ನಿಸದವಂ ಗ್ರಂಥಾನುಭವಗಳಿಂದಾರಿಸುತ
ಹೊಸೆದನೀ ಕಗ್ಗವನು ಮಂಕುತಿಮ್ಮ ||
8. ತಾಳಿ ಮೆಲುಮೆಲನೊಮ್ಮೆ ಧಾಳಿ ರಭಸದಿನೊಮ್ಮೆ |
ಹೇಳದೆಯೆ ಕೇಳದೆಯೆ ಬಹನು ವಿಧಿರಾಯ ||
ಕೀಳ ಮೇಲಾಗಿಪನು ಮೇಲ ಕೀಳಾಗಿಪನು |
ತಾಳುಮೆಯಿನಿರು ನೀನು ಮಂಕುತಿಮ್ಮ ||
9. ದ್ರಾಕ್ಷಿ ರಸವೇನಲ್ಲ ಜೀವನದ ತಿರುಳರ್ಗಮ್ |
ಇಕ್ಷು ದಂಡದವೊಲದು ಕಷ್ಟ ಭೋಜನವೆ ||
ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ |
ಮಾಕ್ಷಿಕರು ಮಿಕ್ಕೆಲ್ಲ ಮಂಕುತಿಮ್ಮ ||
10. ತತ್ವ ಸಾಕ್ಷಾತ್ಕಾರ ಚಿತ್ತಶುದ್ದಿಯಿನಹುದು |
ಚಿತ್ತಶೋಧನೆ ಮತಿಚಮತ್ಕಾರವಲ್ಲ ||
ಬಿತ್ತರದ ಲೋಕಪರಿಪಾಕದಿಂ ಸತ್ಕರ್ಮ |
ಸಕ್ತಿಯಿಂ ಶುದ್ಧತೆಯೊ ಮಂಕುತಿಮ್ಮ ||
Next : ಮಂಕುತಿಮ್ಮನ ಕಗ್ಗಗಳು - 2
ಚೆನ್ನಾಗಿದೆ.
ReplyDeletethanks
Delete