ಹಚ್ಚೇವು ಕನ್ನಡದ ದೀಪ.
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ || ಹಚ್ಚೇವು ||
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು,
ಎಲ್ಲೆಲ್ಲಿ ಕನ್ನಡದ ಕಂಪು ಸೂಸ-
ಲಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ, ಗಡಿನಾಡೆ ಇರಲಿ
ಕನ್ನಡದ ಕಳೆಯ ಕಚ್ಚೇವು,
ಮರತೇವು ಮರವ, ತೆರೆದೇವು ಮನವ, ಎರೆದೇವು ಒಲವ-ಹಿರಿ ನೆನಪ,
ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ || ಹಚ್ಚೇವು ||
ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು,
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೇವು,
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡೆಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ? -ನಾಡೊಲವೆ ನೀತಿ ಹಿಡಿ ನೆನಪ,
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ || ಹಚ್ಚೇವು ||
ಕರುನಾಡಿನವರಿವ ನೆರೆತೀವಿ ಭಾವ-
ದಲಿ ಜೀವನಾಡಿ ನುಡಿಸೇವು,
ತೆರೆತೆರೆದ ಕಣ್ಣಿನಲಿ ನೇಹವೆರೆದು
ನವ ಜ್ಯೋತಿಯನ್ನೆ ಮುಡಿಸೇವು,
ನಮ್ಮನ್ನವುಂಡು ಅನ್ಯಾಯಗೈಯು
ವಂಥವರ ಹುಚ್ಚ ಬಿಡಿಸೇವು,
ಇಹುದೆಮಗೆ ಛಲವು, ಕನ್ನಡರ ಬಲವು ಕನ್ನಡದ ಒಲವು -ಹಿಡಿನೆನವು,
ನಮ್ಮದೆಯ ಕೆಚ್ಚುನೆಚ್ಚುಗಳನೂಡಿ ಹಚ್ಚೇವು ಕನ್ನಡದ ದೀಪ || ಹಚ್ಚೇವು ||
ನಮ್ಮವರು ಗಳಿಸಿದಾ ಹೆಸರ ಉಳಿಸಲು ಎಲ್ಲಾರು ಒಂದುಗೂಡೇವು,
ನಮ್ಮದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೇವು,
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು,
ಮರುಳ, ಕಡೆದೇವು ಇರುಳ ಪಡೆದೇವು,
ತಿರುಳ -ಹಿಡಿನೆನಪ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ.
|| ಹಚ್ಚೇವು ||
0 comments:
Post a Comment